ಟ್ರೈಗ್ಲಿಸರಾಯ್ಡುಗಳು
ನೈಸರ್ಗಿಕವಾಗಿ ಅಧಿಕ ಪರಿಮಾಣದಲ್ಲಿ ದೊರೆಯುವ ಆಮ್ಲೀಯಗ್ಲಿಸರಾಲುಗಳು. ಗ್ಲಿಸರಾಲಿನ ಹೈಡ್ರಾಕ್ಸಿಲ್ ಪುಂಜಗಳು ತೈಲಾಮ್ಲಗಳೊಂದಿಗೆ ಎಸ್ಟರ್ ಬಂಧಗಳ ಮೂಲಕ ಬದ್ಧವಾಗಿರುವ ಸಂಯುಕ್ತಗಳೇ ಟ್ರೈಗ್ಲಿಸರಾಯ್ಡುಗಳು. ಮೂರು ಹೈಡ್ರಾಕ್ಸಿಲ್ ಪುಂಜಗಳು ಒಂದೇ ಬಗೆಯ ತೈಲಾಮ್ಲದಿಂದ ಎಸ್ಟರೀಕೃತವಾಗಿದ್ದರೆ ಆ ಟ್ರೈಗ್ಲಿಸರಾಯ್ಡ್ ಸರಳ ಟ್ರೈಗ್ಲಿಸರಾಯ್ಡ್ ಎನ್ನಿಸಿಕೊಳ್ಳುತ್ತದೆ ; ಭಿನ್ನ ಪ್ರಕೃತಿಯ ತೈಲಾಮ್ಲಗಳಿರುವ ಟ್ರೈಗ್ಲಿಸರಾಯ್ಡನ್ನು ಕ್ಲಿಷ್ಟ ಟ್ರೈಗ್ಲಿಸರಾಯ್ಡ್ ಎಂದು ಕರೆಯುವುದಿದೆ. ತೈಲಾಮ್ಲಗಳು ಸಂತೃಪ್ತ ಅಥವಾ ಅಸಂತೃಪ್ತ ಅಣುಗಳಾಗಿರಬಹುದು. ಇವು ಟ್ರೈಗ್ಲಿಸರಾಯ್ಡಿನಲ್ಲಿರುವ ತೈಲಾಮ್ಲಗಳ ಪ್ರಕೃತಿಯನ್ನು ಅವಲಂಬಿಸಿ ಘನ ಅಥವಾ ದ್ರವರೂಪದಲ್ಲಿರುತ್ತವೆ. ಸಾಮಾನ್ಯವಾಗಿ ಅಸಂತೃಪ್ತ ತೈಲಾಮ್ಲಗಳುಳ್ಳ ಟ್ರೈಗ್ಲಿಸರಾಯ್ಡುಗಳು ಕೊಠಡಿಯ ಉಷ್ಣತೆಯಲ್ಲಿ ದ್ರವರೂಪದಲ್ಲಿರುತ್ತವೆ. ಇವನ್ನು ತೈಲ ಅಥವಾ ಎಣ್ಣೆ ಎಂದು ಕರೆಯುವುದು ವಾಡಿಕೆ. ಸಂತೃಪ್ತ ತೈಲಾಮ್ಲಗಳಿರುವ ಟ್ರೈಗ್ಲಿಸರಾಯ್ಡುಗಳು ಘನವಸ್ತುಗಳು ಮತ್ತು ಕೊಬ್ಬುಗಳು ಎನ್ನಿಸಿಕೊಳ್ಳುತ್ತವೆ.

	ರಾಸಾಯನಿಕ ದೃಷ್ಟಿಯಿಂದ ಟ್ರೈಗ್ಲಿಸರಾಯ್ಡುಗಳನ್ನು ಎಸ್ಟರುಗಳೆಂದು ಪರಿಗಣಿಸಬೇಕು. ಇವನ್ನು ಸೋಡಿಯಮ್ ಹೈಡ್ರಾಕ್ಸೈಡ್ ಅಥವಾ ಪೊಟ್ಯಾಸಿಯಮ್ ಹೈಡ್ರಾಕ್ಸೈಡಿನಿಂದ ಸಂಸ್ಕರಿಸಿದಾಗ ಎಸ್ಟರ್ ಬಂಧ ಒಡೆದು ಗ್ಲಿಸರಾಲ್ ಮತ್ತು ತೈಲಾಮ್ಲಗಳು ಬಿಡುಗಡೆಯಾಗುತ್ತವೆ. ಪ್ರತ್ಯಾಮ್ಲೀಯ ಪರಿಸ್ಥಿತಿ ಇರುವುದರಿಂದ ತೈಲಾಮ್ಲಗಳು ಸೋಡಿಯಮ್ ಅಥವಾ ಪೊಟ್ಯಾಸಿಯಮ್ ಲವಣಗಳನ್ನು ರಚಿಸುತ್ತವೆ. ಇವೇ ಸಾಬೂನುಗಳು. ಎಸ್ಟರ್ ಬಂಧಗಳನ್ನು ಲೈಪೇಸ್ ಕಿಣ್ವಗಳು ಸಹ ಭೇದಿಸುತ್ತವೆ. ಟ್ರೈಗ್ಲಿಸರಾಯ್ಡುಗಳು ನೀರಿನಲ್ಲಿ ವಿಲೀನವಾಗುವುದಿಲ್ಲ. ಆಲ್ಕೊಹಾಲ್, ಈಥರ್, ಕ್ಲೋರೊಫಾರಮ್ ಇತ್ಯಾದಿ ದ್ರವಗಳಲ್ಲಿ ವಿಲೀನವಾಗುತ್ತವೆ. ಇವನ್ನು ಸೋಡಿಯಮ್ ಹೈಡ್ರೊಜನ್ ಸಲ್ಫೇಟಿನೊಂದಿಗೆ ಕಾಸಿದಾಗ ವಿಶಿಷ್ಟವಾದ ವಾಸನೆ ಹೊರಡುವುದು. ಇದಕ್ಕೆ ಅಕ್ರೋಲಿನ್ ಪರೀಕ್ಷೆ ಎಂದು ಹೆಸರು. ತೈಲಗಳ ಅಯೊಡೀನ್ ಮೌಲ್ಯ, ಸಪಾನೀಕರಣ ಸಂಖ್ಯೆ, ಅಸಿಟೈಲ್ ಮೌಲ್ಯ, ಇತ್ಯಾದಿ ಮೌಲ್ಯಗಳನ್ನು ಪಡೆದು ಅವುಗಳ ಗುಣಗಳನ್ನು ನಿರ್ಧರಿಸಬಹುದು.

	ತೈಲಗಳಲ್ಲಿ ಮತ್ತು ಕೊಬ್ಬುಗಳಲ್ಲಿ ಹಲವು ಮಾನವನಿಗೆ ಆಹಾರವಸ್ತುಗಳು. ಸಸ್ಯಮೂಲಗಳಿಂದ ಪಡೆಯುವ ಕೊಬ್ಬರಿ ಎಣ್ಣೆ, ಸೇಂಗಾ ಎಣ್ಣೆ, ಎಳ್ಳೆಣ್ಣೆ ಇತ್ಯಾದಿಗಳು ಸೇವಿಸಲು ಯೋಗ್ಯವಾದ ವಸ್ತುಗಳು. ಲಿನ್‍ಸೀಡ್ ಎಣ್ಣೆ ಆಹಾರವಸ್ತುವಾಗಲು ಅನರ್ಹ. ಆಹಾರ ರೂಪದಲ್ಲಿ ಸೇವಿತವಾಗುವ ತೈಲಗಳು ಸಣ್ಣಕರುಳಿನಲ್ಲಿ ಲೈಪೇಸ್ ಕಿಣ್ವಗಳಿಂದ ಜಲವಿಚ್ಛೇದಿತವಾಗುತ್ತವೆ. ಫಲಿತ ವಸ್ತುಗಳಾದ ಗ್ಲಿಸರಾಲ್ ಮತ್ತು ತೈಲಾಮ್ಲಗಳು ಉತ್ಕರ್ಷಿತವಾಗುತ್ತವೆ ಮತ್ತು ಶಕ್ತಿಯನ್ನು ಬಿಡುಗಡೆ ಮಾಡುತ್ತವೆ. ಎಂತಲೇ ತೈಲಗಳು ಶರ್ಕರಗಳ ಅಭಾವದಲ್ಲಿ ಶಕ್ತಿಯ ಮೂಲಗಳಂತೆ ದೇಹದಲ್ಲಿ ಬಳಸಲ್ಪಡುತ್ತವೆ. ದೇಹದ ಕೋಶಗಳು ಶರ್ಕರ ಮೂಲಗಳಿಂದ ಮತ್ತು ತೈಲಾಮ್ಲಗಳಿಂದ ಟ್ರೈಗ್ಲಿಸರಾಯ್ಡುಗಳನ್ನು ಸಂಶ್ಲೇಷಿಸಬಲ್ಲವು. ತೈಲಗಳನ್ನು ಮತ್ತು ಕೊಬ್ಬುಗಳನ್ನು ಆಹಾರವನ್ನಾಗಿ ಬಳಸುವುದಲ್ಲದೆ ಸಾಬೂನಿನ ತಯಾರಿಕೆಗೆ, ಬಣ್ಣಗಳ ತಯಾರಿಕೆಯಲ್ಲಿ ಅಧಿಕ ಪ್ರಮಾಣದಲ್ಲಿ ಬಳಸಲಾಗುತ್ತಿದೆ. 
(ಎಚ್.ಎಸ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ